ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೃಷಿ ಹೊಂಡಕ್ಕೆ ಬೇಲಿ ನಿರ್ಮಿಸಲು ರೈತರನ್ನು ಪ್ರೇರೇಪಿಸಿ- ಡಾ|| ಎನ್ .ಮಂಜುಳ.
ಕೋಲಾರ:ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾಗಿರುವ ಕೃಷಿ ಹೊಂಡಕ್ಕೆ ಬೇಲಿ ನಿರ್ಮಿಸುವಂತೆ ರೈತರನ್ನು ಪ್ರೇರೇಪಿಸಿ ಅನಾಹುತಗಳು ಆಗದಂತೆ ತಡೆಗಟ್ಟಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ|| ಎನ್. ಮಂಜುಳ ಅವರು ಸೂಚಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿಭಾಗ್ಯ ಯೋಜನೆಯಲ್ಲಿ ರೈತರಿಗೆ ಹಸಿರು ಮನೆ ನೆರಳು ಪರದೆ, ಕೃಷಿ ಹೊಂಡ ನಿರ್ಮಾಣ, ಡೀಸಲ್ ಪಂಪ್ ಸೆಟ್ಗಳನ್ನು ವಿತರಿಸಲಾಗುತ್ತಿದ್ದು, ಈ ಯೋಜನೆಗಳು ಸಮರ್ಪಕವಾಗಿ ಬಳಕೆಯಾಗುವಂತೆ ರೈತರನ್ನು ಪ್ರೇರೇಪಣೆಗೊಳಿಸಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 1500 ಕೃಷಿ ಹೊಂಡಗಳ ಗುರಿಯನ್ನು ಹೊಂದಲಾಗಿದ್ದು, 1062 ಕೃಷಿ ಹೊಂಡಗಳನ್ನು ಮಾಡುವ ಒಬ್ಬ ರೈತನಿಗೆ 1 ಲಕ್ಷದವರೆಗೆ ಸಬ್ಸಿಡಿ ಹಣ ನೀಡಲಾಗುವುದು. ನೇರವಾಗಿ ರೈತನ ಖಾತೆಗೆ ಹಣವನ್ನು ಪಾವತಿ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 143 ಸೆಂ.ಮೀಟರ್ ಮಳೆಯಾಗಬೇಕಿತ್ತು. ಆದರೆ ವಾಡಿಕೆಗಿಂತ ಹೆಚ್ಚು 186 ಸೆ.ಮೀ ಮಳೆಯಾಗಿದೆ. ಜೂನ್ 20 ರ ನಂತರ ರಾಗಿ ಬೆಳೆಯನ್ನು ಬೆಳೆಯಲು ರೈತರು ಮುಂದಾಗುತ್ತಾರೆ. ಮುಳಬಾಗಿಲು ಮತ್ತು ಬಂಗಾರಪೇಟೆ ತಾಲ್ಲೂಕುಗಳಲ್ಲಿ ಶೇಂಗಾ ಮತ್ತು ತೊಗರಿ ಬೆಳೆಯನ್ನು ಈಗಾಗಲೇ ಬಿತ್ತನೆ ಕಾರ್ಯ ನಡೆದಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ 2019-20 ನೇ ಸಾಲಿನಲ್ಲಿ 39.6 ಲಕ್ಷ ಹಣವನ್ನು ಮಂಜೂರು ಮಾಡಲಾಗಿದೆ. 61 ನೀರಿನ ಸಂಸ್ಕರಣ ಘಟಕಗಳ ಕಾರ್ಯ ಬಾಕಿ ಉಳಿದಿವೆ. ಜಿಲ್ಲೆಯಲ್ಲಿ 156 ಪಂಚಾಯಿತಿಗಳು, 1964 ಗ್ರಾಮ ಪಂಚಾಯಿತಿಗಳಿದ್ದು, 109 ಸಮಸ್ಯಾತ್ಮಕ ಗ್ರಾಮಗಳೆಂದು ಗುರ್ತಿಸಲಾಗಿದೆ. 109 ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ಹಾಗೂ 50 ಖಾಸಗಿ ಕೊಳವೆ ಬಾವಿಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬರಗಾಲ ಘೋಷಣೆ ಆದಾಗಿನಿಂದ 360 ಕೊಳವೆ ಬಾವಿಗಳನ್ನು ಕೊರಸಲಾಗಿದೆ. 263 ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಕೆ.ಸಿ ವ್ಯಾಲಿಯ ಯೋಜನೆಯ ಮೂಲಕ 136 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹೊಂದಲಾಗಿದ್ದು, 176 ಕೆರೆಗಳು ಭರ್ತಿಯಾಗಿವೆ. ಯರ್ರಗೋಳ್ ಯೋಜನೆಯು ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಮಾರ್ಕಂಡೇಯ ಡ್ಯಾಂ 26 ಕಾರ್ಯಗಳು ಕುಡಿಯುವ ನೀರಿನ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ನಗರ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ 166 ವಾರ್ಡ್ಗಳ ಪೈಕಿ 74 ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರತಿ ಟ್ಯಾಂಕರ್ಗೆ 525 ರೂ ನಂತೆ 15 ದಿನಗಳಿಗೊಮ್ಮೆ ಬಿಲ್ ಪಾವತಿಸಲಾಗುತ್ತಿದೆ. ಕೃಷಿ ಯೋಜನೆಯಡಿ 2018-19ನೇ ಸಾಲಿನಲ್ಲಿ 86 ಸಾವಿರ ಟನ್ ಮೇವು ಒದಗಿಸುತ್ತಿದ್ದು, 4 ಲಕ್ಷ ಮೆಟ್ರಿಕ್ ಟನ್ ಮೇವು ಸಂಗ್ರಹಣೆ ಮಾಡಲಾಗಿದೆ. ರೈತರಿಗೆ 86 ಸಾವಿರ ಮಿನಿಕಿಟ್ಗಳನ್ನು ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ 8 ರಿಂದ ಅನೇಕ ಬಾರಿ ಮಳೆ ಬಂದ ಸಂದರ್ಭದಲ್ಲಿ ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು, ಮಾವು, ಟೊಮೊಟ್ಯೋ, ಇನ್ನಿತರ ಬೆಳೆಗಳಿಗೆ 18 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಅನೇಕ ರೈತರಿಗೆ ತಲುಪಬೇಕಾಗಿದೆ. ಈಗಾಗಲೇ 3.27 ಲಕ್ಷ ರೈತರ ಖಾತೆಗೆ ಜಮಾ ಮಾಡಲಾಗಿದೆ. ಮಾನವ ಜೀವ ಹಾನಿಯಾದವರಿಗೆ 5 ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ. 40 ಮನೆಗಳು ಹಾನಿಯಾಗಿದ್ದು, 5 ಮನೆಗಳು ತೀವ್ರವಾಗಿ ವ್ಯಸ್ಥಗೊಂಡಿವೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಉಪ ನಿರ್ದೇಶಕರಾದ ಕೃಷ್ಣಮೂರ್ತಿ ಅವರು ಮಾತನಾಡಿ, ತೋಟಗಾರಿಕೆ ಇಲಾಖೆಯಡಿ 80 ಸಾವಿರ ಹೆಕ್ಟೇರು ಮಾವು, 11 ಸಾವಿರ ಹೆಕ್ಟೇರ್ ಟೊಮೊಟೋ ಬೆಳೆಯನ್ನು ಬೆಳೆಯಲಾಗಿದೆ. ಆಲಿಕಲ್ಲು ಮಳೆಯಿಂದ 850 ಹೆಕ್ಟೇರು ನಾಶಗೊಂಡಿದೆ. ಇದರಲ್ಲಿ ಶೇ. 98 ರಷ್ಟು ಮಾವು ಬೆಳೆಯಾಗಿದ್ದು, ಹಾನಿಯ ಜಂಟಿ ಸಮೀಕ್ಷೆ ನಡೆಸಿ ರೂ. 3.27 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇನ್ನು 18 ಸಾವಿರ ಹೆಕ್ಟೇರ್ಗೆ ಪರಿಹಾರ ನೀಡಬೇಕಾಗಿದೆ. 1 ಎಕರೆಗೆ 3500 ರೂ. ನಂತೆ ಸಬ್ಸಿಡಿ ನೀಡಲಾಗುವುದು. ಜಿಲ್ಲೆಯಲ್ಲಿ ಆಲೂಗಡ್ಡೆ ಸಂಸ್ಕರಣ ಘಟಕ ಮತ್ತು ಮೌಲ್ಯವರ್ಧನೆಗೆ ಹೆಚ್ಚು ಬೇಡಿಕೆಯಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ. ಜಗದೀಶ್ ಅವರು ಮಾತನಾಡಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಸಾಲಿನಲ್ಲಿ 22 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, 25 ಲಕ್ಷ ಗುರಿಯನ್ನು ಹೊಂದಲಾಗಿತ್ತು. 2018-19 ನೇ ಸಾಲಿನಲ್ಲಿ 50 ಲಕ್ಷ ಮಾನವ ದಿನಗಳ ಗುರಿಯನ್ನು ಹೊಂದಲಾಗಿದ್ದು, 40 ಲಕ್ಷ ಮಾನವ ದಿನಗಳನ್ನು ಪೂರೈಸಲಾಗಿದೆ. ಇದಕ್ಕೆ 70 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯ ಹೂಳು ತೆಗೆಯುವ ಯೋಜನೆ ಪ್ರಾರಂಭಿಸಲಾಗಿದೆ. 1000 ಚೆಕ್ಡ್ಯಾಂಗಳನ್ನು ಈ ವರ್ಷದ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪಂಚಾಯತ್ ರಾಜ್ ಯೋಜನೆಯಡಿ ಗ್ರಾಮೀಣ ರಸ್ತೆ ಡಾಂಬರು ಮಾಡಲು ಎನ್.ಆರ್.ಇ.ಜಿ ಮೂಲಕ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯಡಿ ಎನ್.ಆರ್.ಇ.ಜಿ ಮೂಲಕ 20 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ಬಾರಿ ರೋಟರಿ ಕ್ಲಬ್ ಜೊತೆಗೂಡಿ ಕೋಟಿ ನಾಟಿ ಯೋಜನೆಯಡಿ 25 ಲಕ್ಷ ಗಿಡಗಳನ್ನು ನಾಟಿ ಮಾಡುವಂತೆ ಯೋಜನೆ ರೂಪಿಸಲಾಗಿದೆ. ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಾವಿರ ಗಿಡ ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಯಾವ ಶಾಲೆಗಳಿಗೆ ಜಮೀನು ಮಂಜೂರಾಗಿದ್ದು, ಶಾಲಾ ಕಟ್ಟಡ ನಿರ್ಮಿಸಲಾಗಿಲ್ಲ ಅಂತಹ ಜಮೀನುಗಳಿಗೆ ಗಡಿ ಗುರುತಿಸಿ ಕಾಂಪೌಂಡ್ ನಿರ್ಮಿಸಲು ಪ್ರಸ್ಥಾವನೆ ಸಲ್ಲಿಸುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿರುವ ಬಗ್ಗೆ ಚರ್ಚಿಸಿದ ಅವರು, ವಾರ್ಡ್ನ್ಗಳ ಹುದ್ದೆಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿರುವ ಅಡಿಗೆ ಕೆಲಸದವರು, ಪದವಿ ಪೂರ್ಣಗೊಳಿಸಿದ್ದಲ್ಲಿ ಅಂತಹವರಿಗೆ ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅನುಮೋದನೆಯೊಂದಿಗೆ ವಾರ್ಡನ್ ಹುದ್ದೆಯ ಪ್ರಭಾರವನ್ನು ನೀಡುವಂತೆ ಸೂಚಿಸಿದರು.
ಮಾವು ಕೊಯ್ಲು ಈಗಾಗಲೇ ಕೃಷಿ, ಪ್ರವಾಸೋದ್ಯಮ ಮಾದರಿಯಲ್ಲಿ ಅದನ್ನು ಹೆಚ್ಚು ಜನಪ್ರಿಯಗೊಳಿಸಲಾಗುತ್ತಿದ್ದು, ಅದೇ ರೀತಿ ರಪ್ತು ಗುಣಮಟ್ಟದ ತರಕಾರಿಗಳು ಹಾಗೂ ಹೂವುಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಮಾಡಿ ಅವರನ್ನು ಜನಪ್ರಿಯಗೊಳಿಸಲು ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಹೆಚ್. ಪುಷ್ಪಲತಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಲಕ್ಷ್ಮಿನಾರಾಯಣ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.