ಕಥೆಗಾರ ಜಿ. ಕೆ. ಐತಾಳರ ಸಂಸ್ಮರಣೆ – ಕೃತಿ ಬಿಡುಗಡೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ:  ಕನ್ನಡದ ಖ್ಯಾತ ಕಥೆಗಾರ ದಿವಂಗತ ಜಿ.ಕೆ.ಐತಾಳರ ಸಂಸ್ಮರಣೆ ಹಾಗೂ  ‘ಜಿ.ಕೆ.ಐತಾಳರ ಆಯ್ದ ಕತೆಗಳು’ ಕೃತಿ ಬಿಡುಗಡೆ ಸಮಾರಂಭವು ಕೋಟದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಾಲಯದಲ್ಲಿ  ನಡೆಯಿತು.
ಕ ಸಾ ಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗೋಡು ರಮೇಶ್ ಭಟ್ ರ ಸಂಪಾದಕತ್ವದಲ್ಲಿ ಸೋಮಯಾಜಿ ಪ್ರಕಾಶನ ಹೊರತಂದಿರುವ  ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಜಿ.ಕೆ.ಐತಾಳರ ಪತ್ರಿಕೋದ್ಯಮ ಹವ್ಯಾಸ, ಅವರ ಸಮಾಜಮುಖಿ ಬದುಕು, ರಂಗಪ್ರಯೋಗಾಸಕ್ತಿ, ಸಾಹಿತ್ಯ, ಬದುಕು –  ಬರೆಹ ಕುರಿತು  ಬೆಳಗೋಡು ರಮೇಶ್ ಭಟ್ ಅವರು ಮಾತನಾಡಿದರು. ಗೋಪಾಲಕೃಷ್ಣ ಶೆಟ್ಟಿ , ನಂದಳಿಕೆ ಬಾಲಚಂದ್ರ ರಾವ್ ಸಂಸ್ಮರಣೆ ಮಾತುಗಳನ್ನಾಡಿದರು. 
ಜಿ.ಕೆ.ಐತಾಳರ ಆಯ್ದ ಕತೆಗಳು ಕೃತಿಯನ್ನು ಪತ್ರಕರ್ತ ಯು.ಎಸ್. ಶೆಣೈ ಬಿಡುಗಡೆ ಮಾಡಿ, ಕನ್ನಡದ ಖ್ಯಾತ ಕಥೆಗಾರ ಜಿ.ಕೆ. ಐತಾಳ ಅವರ ಸಮಗ್ರ ಸಾಹಿತ್ಯದ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಪ್ರೊ. ಉಪೇಂದ್ರ ಸೋಮಯಾಜಿ ಸ್ವಾಗತಿಸಿದರು. ಅನಂತ ಕೃಷ್ಣ ಐತಾಳ್, ಕಾವೇರಮ್ಮ ಉಪಸ್ಥಿತರಿದ್ದರು. ಸೂರಾಲು ನಾರಾಯಣ ಮಡಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಲೇಖಕರ ಹಿತರಕ್ಷಣಾ ಸಂಘ ಸಾಲಿಗ್ರಾಮ – ಚಿತ್ರಪಾಡಿ ಈ ಕಾರ್ಯಕ್ರಮ ಆಯೋಜಿಸಿತ್ತು.