ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಎಸ್ಸೆಸ್ಸೆಲ್ಸಿ ಟಾಪರ್ಸ್ಗೆ ಪ್ರೌಢಶಿಕ್ಷಣ ಮಂಡಳಿಯಿಂದ ನಗದು ಪುರಸ್ಕಾರ ಆಸಕ್ತಿಯಂತೆ ಮುನ್ನಡೆದರೆ ಯಶಸ್ಸು ನಿಮ್ಮನ್ನೇ ಹಿಂಬಾಲಿಸುತ್ತದೆ-ದರ್ಶನ್
ಕೋಲಾರ:- ಬೇರೆಯವರು ಹೇಳಿದಂತಲ್ಲ, ನಿಮ್ಮ ಆಸೆ,ಆಸಕ್ತಿಯಂತೆ ನೀವು ಮುನ್ನಡೆದರೆ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ.ದರ್ಶನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಜಿಲ್ಲೆಯ ಕನ್ನಡ ಮಾಧ್ಯಮದ 13,ಆಂಗ್ಲಮಾಧ್ಯಮದ 13 ಮಂದಿ ಟಾಪರ್ಸ್ಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನೀಡುವ 5 ಸಾವಿರ ರೂ ಪ್ರತಿಭಾ ಪುರಸ್ಕಾರದ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು.
ನಿಮ್ಮದಾರಿ ನೀವೇ ಕಂಡುಕೊಳ್ಳಿ ಆದರೆ ಅದು ಕೆಟ್ಟದಾಗಿರಬಾರದು ಅಷ್ಟೆ, ಅಂಕ ಗಳಿಕೆ ಮಾತ್ರ ಮುಖ್ಯವಲ್ಲ, ಸಚಿನ್ ವಿಶ್ವಶ್ರೇಷ್ಟ ಆಟಗಾರರಾಗಲಿಲ್ಲವೇ? ಜ್ಞಾನ ಪಡೆಯುವ ಶಿಕ್ಷಣ ಇಂದು ಅಗತ್ಯವಾಗಿದೆ, ಸಾಮಾಜಿಕ ಸೇವೆಗಳು ಇಂದು ಜೀವನೋಪಾಯದ ಕ್ಷೇತ್ರಗಳಾಗಿವೆ ನಿಮ್ಮ ಗುರಿ ನಿಮ್ಮ ಆಸಕ್ತಿಯಂತೆ ಇದ್ದರೆ ಖಂಡಿತ ಯಶ ನಿಮ್ಮದಾಗುತ್ತದೆ ಎಂದರು.
ಇದೊಂದು ವಿಶಿಷ್ಟ ಕಾರ್ಯಕ್ರಮ ಇಲ್ಲಿ 2019ರ ಎಸ್ಸೆಸ್ಸೆಲ್ಸಿ ಸಾಧಕರ ಜತೆಗೆ ಅವರ ತಂದೆ,ತಾಯಿ,ಗುರುಗಳು ಒಂದೇ ಕಡೆ ಸೇರಿದ್ದಾರೆ, ನೀವು ದೇವರನ್ನು ಕಾಣುವುದಾದರೆ ತಂದೆ,ತಾಯಿ,ಗುರು ಈ ಮೂವರಲ್ಲಿ ಕಾಣಬೇಕು ಅಂತಹ ಮೂರು ದೇವರುಗಳ ಸಮ್ಮಿಲನ ಇಲ್ಲಾಗಿದೆ ಎಂದರು.
ಕಳೆದ ಸಾಲಿನಲ್ಲಿ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಭಾಷೆಯಲ್ಲಿ 360, ದ್ವಿತೀಯ ಭಾಷೆಯಲ್ಲಿ 191, ತೃತೀಯ ಭಾಷೆಯಲ್ಲಿ 141, ಗಣಿತದಲ್ಲಿ 48, ವಿಜ್ಞಾನದಲ್ಲಿ 11, ಸಮಾಜದಲ್ಲಿ 155 ಮಂದಿ ಶೇ. 100 ಸಾಧನೆ ಮಾಡಿದ್ದಾರೆ ಇದು ಸುಲಭದ ಮಾತಲ್ಲ ಎಂದರು.
ಇಂದು ಇಂಟರ್ನೆಟ್ ಯುಗ ಹಿಂದೆ ಇಂಜಿನಿಯರಿಂಗ್, ಡಾಕ್ಟರ್ ಎರಡು ಕ್ಷೇತ್ರ ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ, ಈಗ ಕಾಲ ಬದಲಾಗಿದೆ, ನಿಮಗೆ ಮೊಬೈಲ್ನಲ್ಲೇ ಮಾಹಿತಿ,ಬದುಕಲು ದಾರಿ ಕಾಣುತ್ತದೆ ಎಂದರು.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀವು ಸ್ಪೂರ್ತಿಯಾಗಿ, ಜಿಲ್ಲೆಯ ಸಾಕ್ಷರತೆ ಶೇ.73 ಇದ್ದು, ಇದು 100 ಆಗಬೇಕು, ಸಮಾಜಕ್ಕೆ ನೆರವಾಗಿ,ಗುರಿ ಸಾಧನೆಯನ್ನು ಕೊನೆವರೆಗೂ ಬಿಡಬೇಡಿ, ಯಶಸ್ಸು ಗಳಿಸುವುದೇ ಮುಖ್ಯವಾಗಲಿ ಎಂದರು.
ನಿಮಗೆ ಅವಕಾಶ,ಅಧಿಕಾರ ಸಿಕ್ಕಾಗ ನಿಮ್ಮಿಂದ ಬೇರೆಯವರ ಮೊಗದಲ್ಲಿ ಸಂತಸ ತರುವುದೇ ನಿಜವಾದ ಸಾಧನೆ, ಮಾನವೀಯ ಗುಣ ಬೆಳೆಸಿಕೊಳ್ಳಿ,ಕಲಿಕೆ ಜತೆಯಲ್ಲೇ ಸಂಸ್ಕಾರ ಮುಖ್ಯ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಕೆ.ರತ್ನಯ್ಯ, ಪ್ರತಿಯೊಬ್ಬರಲ್ಲೂ ಪ್ರತಿಭೆ ಸುಪ್ತವಾಗಿದ್ದು, ಅಂತಹ ಪ್ರತಿಭೆ ಹೊರಬರಲು ಹಿಂದೆ ಗುರು,ತಂದೆತಾಯಿ ಇರುತ್ತಾರೆ ಎಂದರು.
ಉತ್ತಮ ಫಲಿತಾಂಶಕ್ಕೆ ಶಿಕ್ಷಕರಲ್ಲೂ ಬದಲಾವಣೆ ಅಗತ್ಯ, ಪರಿಣಾಮಕಾರಿ ಬೋಧನೆಯಿಂದ ಆಧುನಿಕತೆಗೆ ತಕ್ಕಂತೆ ಬದಲಾವಣೆಯೂ ಆಗುತ್ತಿದೆ, ಅದಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದೇವೆ ಎಂದರು.
ಶೇ.88.06 ಫಲಿತಾಂಶ
5ನೇ ಸ್ಥಾನದ ಗುರಿ
ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಜಿಲ್ಲೆ ಮೊದಲು ಶೇ.86.94 ಫಲಿತಾಂಶದೊಂದಿಗೆ 7ನೇ ಸ್ಥಾನದಲ್ಲಿತ್ತು. ಮರುಮೌಲ್ಯಮಾಪನದ ನಂತರ ಇದು 88.06 ಆಗಿ ರಾಜ್ಯದಲ್ಲೇ 6ನೇ ಸ್ಥಾನ ಪಡೆದಿದ್ದೇವೆ, ಆದರೆ ಈ ಬಾರಿ ನಮ್ಮ ಗುರಿ 5ನೇ ಸ್ಥಾನದೊಳಗೆ ಇರಬೇಕು ಎಂಬುದಾಗಿದೆ ಎಂದರು.
ಕಳೆದ ಮಾರ್ಚ್ನಲ್ಲಿ ತೇರ್ಗಡೆಯಾದ 16328 ವಿದ್ಯಾರ್ಥಿಗಳ ಪೈಕಿ ಶೇ.79.40 ಮಕ್ಕಳು ಶೇ.60ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದಾರೆ, ಈ ಬಾರಿ ಮತ್ತಷ್ಟು ಗುಣಾತ್ಮಕತೆಗೆ ಒತ್ತು ನೀಡುತ್ತಿರುವುದಾಗಿ ನುಡಿದರು.
ಫಲಿತಾಂಶ ಉತ್ತಮಪಡಿಸಲು,ಗುಣಾತ್ಮಗೊಳಿಸಲು ಕ್ರಿಯಾಯೋಜನೆ ತಯಾರಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ, ಮಾದರಿ ಪ್ರಶ್ನೆಪತ್ರಿಕೆ, ಅಧ್ಯಾಯವಾರು ಪ್ರಶ್ನೆಪತ್ರಿಕೆ, ನನ್ನನ್ನೊಮ್ಮೆ ಗಮನಿಸಿ ಪ್ರಶ್ನೆಕೋಠಿ ಎಲ್ಲವನ್ನು ಪರಿಣಾಮಕಾರಿಯಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ಕೆಲಸವಾಗುತ್ತಿದೆ ಎಂದರು.
ಜಿಲ್ಲೆಗೆ ಮೊದಲಿನರಾದ ತಾಲ್ಲೂಕಿನ ಬಿಜಿಎಸ್ ಶಾಲೆಯ ಎ.ಎಸ್.ಮನು ಎಂಬ ವಿದ್ಯಾರ್ಥಿಯ ಅಜ್ಜ ಅನಿಸಿಕೆ ಹಂಚಿಕೊಂಡು ತಮ್ಮ ಮೊಮ್ಮಗನ ಸಾಧನೆಗೆ ಶಾಲೆಯ ಶಿಕ್ಷಕರು ಕಾರಣ, ಆದರೆ ಇಂತಹ ಸಾಧಕರಿಗೆ ಉಚಿತ ಶಿಕ್ಷಣ ನೀಡಲು ಖಾಸಗಿ ಸಂಸ್ಥೆಗಳು ಮುಂದಾಗಲಿ ಎಂದು ಕೋರಿದರು.
ಜಿಲ್ಲೆಗೆ 2ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಸಿರಿ ಕುಲಕರ್ಣಿ, ನಾನು ಅಂಕಕ್ಕಾಗಿ ಓದಲಿಲ್ಲ, ಜ್ಞಾನಕ್ಕಾಗಿ ಓದಿದೆ, ನನಗೆ ಗುರುಗಳು, ಶಿಕ್ಷಕರು ಸಹಕಾರ ನೀಡಿದರು ಎಂದರು.
ಕಾರ್ಯಕ್ರಮ ನಿರೂಪಿಸಿದ ಶಿಕ್ಷಣಾಧಿಕಾರಿ ಸಿ.ಆರ್.ಆಶೋಕ್, ಕೋಲಾರ ಜಿಲ್ಲೆ ರಾಜಕೀಯ,ಸಾಹಿತ್ಯ,ಶಿಕ್ಷಣ ಈ ಮೂರು ಕ್ಷೇತ್ರಗಳಲ್ಲೂ ಸಾಧನೆ ಮಾಡಿದೆ, 6ನೇ ಸ್ಥಾನಕ್ಕೇರಲು ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಅವರಿಗೆ ಧನ್ಯವಾದ ಸಲ್ಲಿಸಿದರುಲ.
ಕಾರ್ಯಕ್ರಮದಲ್ಲಿ ವಿಷಯ ಪರಿವೀಕ್ಷಕಿ ಗಾಯತ್ರಿ, ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ಬಿಜಿಎಸ್ ಶಾಲೆ ಮುಖ್ಯಸ್ಥ ಸಿ.ಬೈರಪ್ಪ, ಸಬರಮತಿ ಶಾಲೆಯ ಬಿ.ವೆಂಕಟೇಶ್, ರವಿ,ಇಲಾಖೆಯ ಪ್ರೇಮಲತಾ ಮತ್ತಿತರರು ಉಪಸ್ಥಿತರಿದ್ದರು.