ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಅವಿಭಜಿತ ಜಿಲ್ಲೆಯಲ್ಲಿ ೨೯೭೮೪ ಮಹಿಳಾ ಸ್ವಸಹಾಯ ಸಂಘಗಳಿದ್ದು, ಮೊದಲ ಹಂತದಲ್ಲಿ ೭೩೦೦ ಸಂಘಗಳ ಕಾರ್ಯಚಟುವಟಿಕೆಗಳನ್ನು ಇ-ಶಕ್ತಿ ಯೋಜನೆಯಡಿ ತರಲು ನೇಮಕಗೊಂಡಿರುವ ೨೪೩ ಪ್ರೇರಕರ ಸಭೆಯನ್ನು ಡಿ.೧೮ ರಂದು ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಬುಧವಾರ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಬಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಜಿಲ್ಲಾ ಯೋಜನಾ ಅನುಷ್ಟಾನ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬ್ಯಾಂಕ್ ಈಗಾಗಲೇ ೪.೪೦ ಲಕ್ಷ ಮಹಿಳೆಯರಿಗೆ ಸಾಲ ನೀಡಿದೆ ಎಂದರು.ನಬಾರ್ಡ್ನ ಇ-ಶಕ್ತಿ ಯೋಜನೆಯಡಿ ಅವಿಭಜಿತ ಜಿಲ್ಲೆಯ ೭೩೦೦ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆಗಳನ್ನು ಆನ್ಲೈನ್ ವ್ಯಾಪ್ತಿಗೆ ತರಲು ೨೪೩ ಮಂದಿ ಪ್ರೇರಕರನ್ನು ಈಗಾಗಲೇ ಆಯ್ಕೆ ಮಾಡಿ ತರಬೇತಿ ನೀಡಿದೆ ಎಂದರು.
ದೇಶದಲ್ಲೇ ಅತಿ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ ಖ್ಯಾತಿಗೆ ಡಿಸಿಸಿ ಬ್ಯಾಂಕ್ ಒಳಗಾಗಿದೆ, ಈ ಹಿನ್ನಲೆಯಲ್ಲಿ ಇ-ಶಕ್ತಿ ವ್ಯಾಪ್ತಿಗೆ ಸಂಘಗಳ ಕಾರ್ಯಚಟುವಟಿಕೆಗಳನ್ನು ತರುವ ಪ್ರಾಯೋಗಿಕ ಪ್ರಯತ್ನಕ್ಕಾಗಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ನಬಾರ್ಡ್ ಆಯ್ಕೆ ಮಾಡಿಕೊಂಡಿದೆ ಎಂದರು.ಮೊದಲ ಹಂತದಲ್ಲಿ ೭೩೦೦ ಮಹಿಳಾ ಸಂಘಗಳನ್ನು ಇ-ಶಕ್ತಿ ವ್ಯಾಪ್ತಿಗೆ ತರಲಿದ್ದು, ೭೩ ಸಾವಿರ ಮಂದಿ ತಾಯಂದಿರು ಈ ಸಂಘಗಳ ಸದಸ್ಯರಾಗಿದ್ದಾರೆ ಎಂದ ಅವರು, ಮೊದಲ ಹಂತವನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಬೇಕಾಗಿದ್ದು, ಈ ಸಂಬಂಧ ಈಗಾಗಲೇ ಎಸ್ಎಫ್ಸಿಎಸ್ಗಳ ಗಣಕೀಕರಣ ಕಾರ್ಯ ಮುಗಿಸಲು ಕ್ರಮವಹಿಸಲಾಗಿದೆ ಎಂದರು.
ಮಹಿಳಾ ಶಕ್ತಿಯಾಗಿಇ-ಶಕ್ತಿ ಯೋಜನೆ
ಮಹಿಳಾ ಸ್ವಸಹಾಯ ಸಂಘಗಳ ಮಾಸಿಕ ಸಭೆ,ಸಾಲ ವಿತರಣೆ, ಸಾಲ ಮರುಪಾವತಿ, ಉಳಿತಾಯ ಸೇರಿದಂತೆ ಎಲ್ಲಾ ಚಟುವಟಿಕೆಗಳು ಆನ್ಲೈನ್ಗೆ ದಾಖಲಾಗಲಿದೆ, ಎಲ್ಲಾ ಸಂಘಗಳಿಗೂ ಯೂಸರ್ಐಡಿ ಹಾಗೂ ಪಾಸ್ವರ್ಡ್ ನೀಡುತ್ತಿದ್ದು, ೩೦ ಸಂಘಗಳಿಗೆ ಒಬ್ಬರಂತೆ ನೇಮಕಗೊಂಡ ಪ್ರೇರಕರು ಆನ್ಲೈನ್ಗೆ ಅಪ್ಲೋಡ್ ಮಾಡುವರು ಎಂದ ಅವರು, ಸಂಘಗಳ ಸಂಪೂರ್ಣ ಡಾಟಾ ಮಾಹಿತಿ ಡಿಸಿಸಿ ಬ್ಯಾಂಕ್ ಸಾಫ್ಟ್ವೇರ್ಗೆ ಹರಿದು ಬರುವುದರಿಂದ ಸಂಘಗಳ ಸದೃಢತೆ ಕಾರಣವಾಗುತ್ತದೆ ಎಂದು ತಿಳಿಸಿದರು.ಇ-ಶಕ್ತಿ ಯೋಜನೆಯಿಂದಾಗಿ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ಬರಲಿದೆ, ಯಾವುದೇ ಅವ್ಯವಹಾರಗಳಿಗೆ ಅವಕಾಶ ಇರುವುದಿಲ್ಲ, ಸದಸ್ಯರ ಹಣಕ್ಕೆ ಭದ್ರತೆ ಇರುತ್ತದೆ ಎಂದು ತಿಳಿಸಿದರು.
ಮಹಿಳಾ ಸಂಘಗಳ ಸದಸ್ಯರಲ್ಲಿ ಒಂದಿಬ್ಬರು ಹಣದ ದುರ್ಬಳಕೆ ಮಾಡಿಕೊಂಡರೆ ಅದರ ಮಾಹಿತಿ ಇಲ್ಲದೇ ಇಡೀ ಸಂಘದ ಸದಸ್ಯರೇ ಸಂಕಷ್ಟಕ್ಕೆ ಒಳಗಾಗುತ್ತಾರೆ ಆದರೆ ಇ-ಶಕ್ತಿ ಅಳವಡಿಕೆಯಿಂದ ಪಾರದರ್ಶಕತೆಗೆ ಅವಕಾಶವಾಗಿ ಭ್ರಷ್ಟತೆ ಕೊನೆಗೊಳ್ಳುತ್ತದೆ ಎಂದರು.
ಪ್ರೇರಕರಿಗೆ ತಿಂಗಳಿಗೆ೪೨೦೦ ಗೌರವಧನ
ನಬಾರ್ಡ್ ಎಜಿಎಂ ನಟರಾಜನ್ ಮಾತನಾಡಿ, ಈಗಾಗಲೇ ಮಹಿಳಾ ಸ್ವಸಹಾಯ ಸಂಘಗಳ ಹೆಚ್ಚು ಶಿಕ್ಷಣ ಪಡೆದ ಬುದ್ದಿವಂತ ಹೆಣ್ಣು ಮಕ್ಕಳನ್ನೇ ಪ್ರೇರಕರಾಗಿ ಆಯ್ಕೆ ಮಾಡಿದ್ದು, ೩೦ ಸಂಘಗಳಿಗೆ ಒಬ್ಬರಂತೆ ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರಿಗೆ ತಿಂಗಳಿಗೆ ೪೨೦೦ ರೂ ಸಂಭಾವನೆ ಸಿಗಲಿದೆ ಜತೆಗೆ ೨೫೦ ರೂ ಮೊಬೈಲ್ ಬಳಕೆಗೆ ಹಣ ಸಿಗಲಿದೆ ಎಂದು ವಿವರಿಸಿದರು.ಮಹಿಳಾ ಸಂಘಗಳಿಗೆ ಅತಿ ಹೆಚ್ಚು ಸಾಲ ನೀಡಿರುವುದು ಮಾತ್ರವಲ್ಲ, ವಸೂಲಾತಿಯಲ್ಲೂ ಅತ್ಯಂತ ಉತ್ತಮ ಸಾಧನೆ ಮಾಡಿರುವುದಕ್ಕಾಗಿ ಕೋಲಾರ ಡಿಸಿಸಿ ಬ್ಯಾಂಕನ್ನು ನಬಾರ್ಡ್ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದೆ, ಈಗ ಮೊದಲ ಹಂತವಾಗಿದ್ದು,ಮುಂದಿನ ದಿನಗಳಲ್ಲಿ ಎಲ್ಲಾ ಸಂಘಗಳನ್ನೂ ಇ-ಶಕ್ತಿ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.ಮಹಿಳಾ ಸಂಘಗಳು ಇ-ಶಕ್ತಿ ವ್ಯಾಪ್ತಿಗೆ ಬಂದು ಶಕ್ತಿಯುತವಾದರೆ ಮಾತ್ರ ಡಿಸಿಸಿ ಬ್ಯಾಂಕ್ ಬಲವರ್ಧನೆ ಸಾಧ್ಯ ಎಂದ ಅವರು ನಂಬಿಕೆ,ವಿಶ್ವಾಸ ಬಲಗೊಳ್ಳಲು ಈ ಯೋಜನೆ ಸಹಕಾರಿ ಎಂದರು.ಸಭೆಯ ಬ್ಯಾಂಕಿನ ಸಿಇಒ ಎಂ.ರವಿ, ಎಜಿಎಂ ಖಲೀಮುಲ್ಲಾ, ಬೇಬಿ ಶಾಮಿಲಿ,ಟಿ.ಎನ್.ಶುಭ,ಕೆ.ಎನ್.ಮಮತಾ ಮತ್ತಿತರರಿದ್ದರು.