ಅಧಿಕಾರಿಗಳ ಸಭೆಯಲ್ಲಿ ಶಾಸಕಿ ರೂಪಕಲಾ ಕಟ್ಟಪ್ಪಣೆ ಟೆಂಡರ್ ಆಗಿರುವ ಕಾಮಗಾರಿ ವಾರದಲ್ಲಿ ಆರಂಭಿಸಲು ಸೂಚನೆ  –  ಕೆಜಿಎಫ್ ಅಶೋಕ ರಸ್ತೆ ವಿವಾದ ಸವಾಲಾಗಿ ಪರಿಗಣಿಸಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

 

ಅಧಿಕಾರಿಗಳ ಸಭೆಯಲ್ಲಿ ಶಾಸಕಿ ರೂಪಕಲಾ ಕಟ್ಟಪ್ಪಣೆ ಟೆಂಡರ್ ಆಗಿರುವ ಕಾಮಗಾರಿ ವಾರದಲ್ಲಿ ಆರಂಭಿಸಲು ಸೂಚನೆ  –  ಕೆಜಿಎಫ್ ಅಶೋಕ ರಸ್ತೆ ವಿವಾದ ಸವಾಲಾಗಿ ಪರಿಗಣಿಸಿ

 

 

 

 

ಕೋಲಾರ: ಕೆಜಿಎಫ್ ಅಶೋಕ ರಸ್ತೆ ವಿವಾದವನ್ನು ಅಧಿಕಾರಿಗಳು ಸವಾಲಾಗಿ ಪರಿಗಣಿಸುವ ಮೂಲಕ ತಕ್ಷಣ ಕಾಮಗಾರಿ ನಡೆಸಲು ಅನುವಾಗುವಂತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕಿ ರೂಪಕಲಾಶಶಿಧರ್ ಹೇಳಿದರು.
ಇಲ್ಲಿನ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿನ ಇಲಾಖೆ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು 25ಕ್ಕೂ ಹೆಚ್ಚು ಕೆಲಸಗಳಲ್ಲಿ ಶೇ.50ಕ್ಕೂ ಹೆಚ್ಚು ಆರಂಭವೇ ಆಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ಸಮಸ್ಯೆಯಿಂದಾಗಿ ಕಳೆದ 50 ದಿನದಿಂದ ಅಭಿವೃದ್ಧಿ ಕೆಲಸ ಮರೀಚಿಕೆಯಾಗಿ ಹಿನ್ನಡೆ ಆಗಿದ್ದು ಇದೀಗ ಲಾಕ್‍ಡೌನ್ ತೆರವು ಆಗಿರುವುದರಿಂದಾಗಿ ಸಮರೋಪಾದಿಯಲ್ಲಿ ಕಾಮಗಾರಿಗಳನ್ನು ನಿರ್ವಹಣೆ ಮಾಡುವುದರೊಂದಿಗೆ ನಿಗದಿತ ಅವಧಿಯೊಳಗೆ ಮುಕ್ತಾಯ ಮಾಡಬೇಕೆಂದು ಕಟ್ಟಪ್ಪಣೆ ಮಾಡಿದರು.
ದಶಕದ ವಿವಾದ: ಅಶೋಕಾ ರಸ್ತೆ ವಿವಾದ ಒಂದು ದಶಕದಿಂದ ಮುಂದುವರೆದಿದ್ದು ಕನಿಷ್ಟ ಅಭಿವೃದ್ಧಿ ಮಾಡಲೂ ಸಹಾ ಬಿಡುತ್ತಿಲ್ಲ. ಅಧಿಕಾರಿಗಳು ಈ ವಿಷಯದಲ್ಲಿ ಧೈರ್ಯ ತೋರದ ಕಾರಣ ಜಿಲ್ಲಾಡಳಿತದ್ದೇ ತಪ್ಪು ಎಂದು ಬಿಂಬಿಸಲಾಗುತ್ತಿದ್ದು ಜತೆಗೆ ಸಮರ್ಪಕ ಮಾಹಿತಿಯನ್ನು ನೀಡದೆ ಕೋರ್ಟ್ ದಿಕ್ಕನ್ನೂ ತಪ್ಪಿಸಲಾಗಿದೆ. ವ್ಯಾಪಾರಸ್ಥರು ಎಷ್ಟು ವರ್ಷದಿಂದ ಎಷ್ಟು ಜಾಗದಲ್ಲಿ ವಹಿವಾಟು ನಡೆಸುತ್ತಿದ್ದಾರೆ ಮತ್ತು ಇದಕ್ಕೆ ಸಂಬಂಧಪಟ್ಟಂತೆ ತೆರಿಗೆ ಮತ್ತಿತರ ಶುಲ್ಕವನ್ನು ನಗರಸಭೆಗೆ ಪಾವತಿ ಮಾಡಿದ್ದಾರಾ? ಅಸಲಿಗೆ ಜಾಗಕ್ಕೆ ಸಂಬಂಧಪಟ್ಟಂತೆ ವ್ಯಾಪಾರಸ್ಥರ ಬಳಿ ಇರುವ ದಾಖಲಾತಿಗಳೇನು ಎಂಬುದನ್ನು ಸರ್ಕಾರಿ ವಕೀಲರಿಗೆ ಒದಗಿಸಲು ಇನ್ನಾದರೂ ಅಧಿಕಾರಿಗಳು ಮುಂದಾದರೆ ನಾವು ಹೋರಾಟ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನೋಟಿಸ್‍ಗೆ ಉತ್ತರವಿಲ್ಲ: ಈಗಾಗಲೇ ಹಲವಾರು ಬಾರಿ ವ್ಯಾಪಾರಸ್ಥರಿಗೆ ನೋಟಿಸ್ ನೀಡಲಾಗಿದ್ದು ಆದರೂ ಅವರು ದಾಖಲಾತಿಗಳನ್ನು ತಂದು ಕೊಡುವ ಸೌಜನ್ಯ ತೋರಿಲ್ಲ. ಹೀಗಾಗಿ ಈ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಮೂಲಕ ಉಳಿದವರು ಸುಮ್ಮನಾಗುವಂತೆ ಮಾಡಬೇಕು. ನಗರಸಭೆಯಲ್ಲಿ ದುಡ್ಡಿಲ್ಲ, ಲೋಕೋಪಯೋಗಿ ಇಲಾಖೆಯಲ್ಲಿ ಅನುದಾನವಿಲ್ಲ ಎಂದು ಸುಮ್ಮನೆ ಕೂತರೆ ಕೆಲಸಗಳು ಆಗುವುದಿಲ್ಲ. ನಿಮ್ಮ ಕೈಲಾದ ಕೆಲಸ ನೀವು ಮಾಡಿದರೆ ವಿಧಾನಸೌಧದಲ್ಲಿ ನಾನು ಮುಂದಿನ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಹಂಪ್ ಹಾಕಿ: ಇತ್ತೀಚೆಗೆ ಕೋಲಾರ-ಬೇತಮಂಗಲ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು ಸಾವುನೋವುಗಳೂ ಆಗುತ್ತಿವೆ. ಹೀಗಾಗಿ ಶಾಲೆ,ಆಸ್ಪತ್ರೆ,ನೀರಿನ ಟ್ಯಾಂಕಿ ಸೇರಿದಂತೆ ಹಳ್ಳಿಗಳ ಬಳಿ ಸ್ಪೀಡ್ ಬ್ರೇಕರ್ಸ್ ನಿರ್ಮಾಣ ಮಾಡಬೇಕಿದ್ದು ಬಡಮಾಕನಹಳ್ಳಿಯಲ್ಲಿ ತುರ್ತಾಗಿ ಕೆಲಸ ಆಗಬೇಕು ಎಂದು ಸೂಚಿಸಿದರು. ಇದೀಗ ಹಲವಾರು ಹಂಪ್ ಇದ್ದರೂ ಅಪಘಾತಗಳು ಮರುಕಳಿಸುತ್ತಿರುವುದರಿಂದಾಗಿ ಜನರ ಅನುಕೂಲಕ್ಕಾಗಿ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ಶಾಸಕಿ ರೂಪಾಕಲಾ ತಾಕೀತು ಮಾಡಿದರು.
ಆದೇಶಕ್ಕೆ ನಿರೀಕ್ಷೆ: ಕೋವಿಡ್ ತುರ್ತು ಪರಿಸ್ಥಿತಿಯಿಂದಾಗಿ ಯಾವುದೇ ಕಾಮಗಾರಿಗನ್ನು ನಡೆಸದಂತೆ ಸರ್ಕಾರದಿಂದ ಆದೇಶ ಬಂದಿದ್ದು ಇದೀಗ ಲಾಕ್‍ಡೌನ್ ತೆರವು ಆಗಿರುವುದರಿಂದಾಗಿ ಕಾಮಗಾರಿ ಆರಂಭಕ್ಕೆ ಮರು ಆದೇಶ ನಿರೀಕ್ಷಿಸಲಾಗಿದೆ. ಆದಾಗ್ಯೂ ರಸ್ತೆ ಮತ್ತಿತರ ತುರ್ತು ಕಾಮಗಾರಿಗಳನ್ನು ಮುಂದುವರೆಸಲಾಗಿದ್ದು ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿನ ಉಳಿಕೆ ಕಾಮಗಾರಿಗಳನ್ನು ತಕ್ಷಣ ಆರಂಭಿಸಲು ಗುತ್ತಿಗೆದಾರರಿಗೆ ಸೂಚನೆ ನೀಡುವ ಜತೆಗೆ ಮಿನಿ ವಿಧಾನಸೌಧದ ಎಸ್ಟಿಮೆಂಟ್ ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆದುಕೊಂಡು ತುರ್ತಾಗಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಎಕ್ಸಿಕ್ಯಟೀವ್ ಎಂಜಿನಿಯರ್ ಭದ್ರಿನಾಥ್ ಪ್ರತಿಕ್ರಿಯಿಸಿದರು.
ಫೋಟೋ ಕ್ಯಾಪ್ಷನ್: ಕೋಲಾರದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿನ ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಕುರಿತು ಶಾಸಕಿ ರೂಪಕಲಾ ಶಶಿಧರ್ ಪ್ರಗತಿ ಪರಿಶೀಲನೆ ನಡೆಸಿದರು.

ಕೋರ್ಟ್

ಕೆಜಿಎಫ್ ಅಶೋಕಾ ರಸ್ತೆ ವಿಚಾರದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದ್ದು ಕೋರ್ಟ್ ತಿಳಿಸಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಶೀಘ್ರವಾಗಿ ಸಕಾರಾತ್ಮಕ ನಿಲುವು ಕೈಗೊಳ್ಳಬೇಕು. ಈಗಾಗಲೇ 200 ಮೀಟರ್ ರಸ್ತೆ ಮಾಡಲು 10 ವರ್ಷ ಆಗಿದ್ದು ಇನ್ನಾದರೂ ಕೆಲಸ ಆರಂಭ ಆರಂಭ ಆಗುವಂತೆ ಮಾಡಬೇಕು. ಮುಖ್ಯವಾಗಿ ಟೆಂಡರ್ ಆಗಿರುವ ಎಲ್ಲ ಕಾಮಗಾರಿಗಳನ್ನ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಒಂದು ವಾರದಲ್ಲಿ ಆರಂಭ ಆಗುವಂತೆ ಮಾಡಬೇಕು.
– ರೂಪಕಲಾಶಶಿಧರ್, ಶಾಸಕರು