ಅಣ್ಣಿಹಳ್ಳಿ ಸೊಸೈಟಿಗೆ ನಾಗರಾಜು ಸಾರಥ್ಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

 

 

ಅಣ್ಣಿಹಳ್ಳಿ ಸೊಸೈಟಿಗೆ ನಾಗರಾಜು ಸಾರಥ್ಯ

 

 

 

 

 

ಕೋಲಾರ: ತಾಲೂಕಿನ ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಅಣ್ಣಿಹಳ್ಳಿನಾಗರಾಜ, ಉಪಾಧ್ಯಕ್ಷರಾಗಿ ತೊಂಡಾಲ ವನಿತಾವೆಂಕಟರಾಮ್ ಅವಿರೋಧ ಆಯ್ಕೆಯಾದರು. ಅಂತೆಯೇ ಸುಗಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಜನ್ನಘಟ್ಟ ಟಿ.ವಿ.ತಿಮ್ಮರಾಯಪ್ಪ, ಉಪಾಧ್ಯಕ್ಷರಾಗಿ ಸುಗಟೂರುರುಕ್ಕಮ್ಮ ಅವಿರೋಧವಾಗಿ ಚುನಾಯಿತರಾದರು.

ಸೊಸೈಟಿ ನಿರ್ದೇಶಕರುಗಳ ಸ್ಥಾನಕ್ಕೆ ಚುನಾವಣೆ ನಡೆದು ಅವಿರೋಧ ಆಯ್ಕೆ ಪೂರ್ಣಗೊಂಡಿದ್ದು ಈ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹಾಗೂ ನಿರ್ದೇಶಕ ಎಂಎಲ್.ಅನಿಲ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ನಗರದ ಯೂನಿಯನ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎರಡೂ ಸಂಘಗಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ದಾಖಲೆ ಸಾಲ ವಿತರಣೆ: ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಿಹಳ್ಳಿ ಸೊಸೈಟಿ ನೂತನ ಅಧ್ಯಕ್ಷ ಅಣ್ಣಿಹಳ್ಳಿನಾಗರಾಜ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಎರಡೂ ಸಹಕಾರ ಸಂಘಗಳಿಂದ ಅತಿ ಹೆಚ್ಚಿನ ಸಾಲವನ್ನು ಸ್ತ್ರೀ ಶಕ್ತಿ ಸಂಘಗಳಿಗೆ ನೀಡುವ ಮೂಲಕ ದಾಖಲೆ ಮಾಡಲಾಗಿದ್ದು ಎರಡೂ ಹೋಬಳಿಯಲ್ಲಿ ಹೆಣ್ಣು ಮಕ್ಕಳಲ್ಲಿ ಮನೆ ಮಾತಾಗಿದೆ. ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಶಾಸಕ ಕೆ.ಶ್ರೀನಿವಾಸಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ನಿರ್ದೇಶಕರಾದ ಅನಿಲ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ,ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ಅವರ ಮಾರ್ಗದರ್ಶನದಲ್ಲಿ ರೈತರು ಹಾಗೂ ಬಡ ಹೆಣ್ಣು ಮಕ್ಕಳ ಅಭಿವೃದ್ಧಿಗೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಯಾವುದೇ ವರ್ಗಕ್ಕೂ ನೋವಾಗದ ರೀತಿಯಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಮಾದರಿ ಸಂಘ: ಸುಗಟೂರು ಸೊಸೈಟಿ ನೂತನ ಅಧ್ಯಕ್ಷ ಜನ್ನಘಟ್ಟ ಟಿ.ವಿ.ತಿಮ್ಮರಾಯಪ್ಪ ಮಾತನಾಡಿ, ಸಹಕಾರ ಸಂಘದ ನಿರ್ದೇಶಕರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವನ್ನು ಮಾದರಿಯಾಗಿ ಅಭಿವೃದ್ಧಿ ಮಾಡುವ ಜತೆಗೆ ರೈತರು ಹಾಗೂ ಸ್ತ್ರೀ ಶಕ್ತಿ ಸಂಘದ ಬಡ ಮಹಿಳೆಯರಿಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ಸ್ವಾವಲಂಭಿಗಳನ್ನಾಗಿಸಲು ದುಡಿಯುವುದಾಗಿ ಆಶ್ವಾಸನೆ ನೀಡಿದರು. ಸಹಕಾರಿ ಮುಖಂಡರಾದ ಕೃಷ್ಣೇಗೌಡ, ಅರಹಳ್ಳಿ ಲಿಂಗಣ್ಣ, ಸಿಇಒಗಳಾದ ಅಣ್ಣಹಳ್ಳಿಶ್ರೀನಿವಾಸ್, ಸುಗಟೂರು ಎಂ.ಪುಟ್ಟರಾಜು, ಚುನಾವಣಾಧಿಕಾರಿ ಎಲೀಶ್ ಕುಮಾರ್ ಮತ್ತು ವೆಂಕಟೇಶಬಾಬು ಅವರು ನೂತನ ಅಧ್ಯಕ್ಷರುಗಳು ಮತ್ತು ಉಪಾಧ್ಯಕ್ಷರುಗಳನ್ನು ಅಭಿನಂದಿಸಿದರು.

ಅಣ್ಣಹಳ್ಳಿ ಸೊಸೈಟಿ ನಿರ್ದೇಶಕರಾದ ಬ್ಯಾಟಪ್ಪ,ಲಕ್ಷ್ಮಮ್ಮ,ಎಂ.ಮುನಿವೆಂಕಟಪ್ಪ,ಟಿ.ನಾರಾಯಣಸ್ವಾಮಿ,ಮುನೇಗೌಡ,ಮುನಿವೆಂಕಟಪ್ಪ,ಸುಬ್ರಮಣಿ ಇದ್ದರು. ಸುಗಟೂರು ಸೊಸೈಟಿ ನಿರ್ದೇಶಕರಾದ ವೆಂಕಟರಾಮರೆಡ್ಡಿ,ಎ.ಸಿ.ಭಾಸ್ಕರ್,ವೆಂಕಟರಾಮಪ್ಪ,ಗೋಪಾಲಗೌಡ,ಡಿ.ಗೋಪಾಲಪ್ಪ,ಎಂ.ಎಸ್.ರಮಣಾರೆಡ್ಡಿ,ಅಮರನಾರಾಯಣಸ್ವಾಮಿ,ವೆಂಕಟಮ್ಮ,ಸವಿತಾ ಎನ್.ಶೆಟ್ಟಿ ಹಾಜರಿದ್ದರು. ಫೋಟೋ ಕ್ಯಾಪ್ಷನ್:ಕೋಲಾರ ತಾಲೂಕಿನ ಅಣ್ಣಿಹಳ್ಳಿ ಹಾಗೂ ಸುಗಟೂರು ಸೊಸೈಟಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳನ್ನು ಸಹಕಾರಿ ಯೂನಿಯನ್‍ನಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.(17ಕೆಪಿಎಚ್1)

ಸೊಸೈಟಿ ಗಟ್ಟಿ ಆದರೆ ಬ್ಯಾಂಕ್ ಅಭಿವೃದ್ಧಿ: ಗೋವಿಂದಗೌಡ ಕೋಲಾರ ಡಿಸಿಸಿ ಬ್ಯಾಂಕ್ ಸಾಧನೆಗೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಗಳೇ ಬುನಾದಿ. ಸೊಸೈಟಿಗಳು ಗಟ್ಟಿ ಆಗದ ಹೊರತು ಬ್ಯಾಂಕ್ ಸುಸ್ಥಿರ ಅಭಿವೃದ್ಧಿ ಕಷ್ಟ ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು. ಸೊಸೈಟಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಸಿಇಒಗಳು ಜನರಿಂದ ಠೇವಣಿ ಸಂಗ್ರಹಣೆ ಮಾಡುವ ಮೂಲಕ ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಮುಂದಾಗಬೇಕು. ಮೊದಲು ಹಾಲು ಡೇರಿಗಳನ್ನು ಸಹಕಾರಿ ವ್ಯಾಪ್ತಿಗೆ ತೆಗೆದುಕೊಳ್ಳುವ ಜತೆಗೆ ಎಲ್ಲ ರೈತರಿಂದಲೂ ವೈಯಕ್ತಿಕ ಖಾತೆಗಳನ್ನು ತೆರೆಸಲು ಮುಂದಾಗಬೇಕು.

ಕೋಲಾರ ಡಿಸಿಸಿ ಬ್ಯಾಂಕ್ ಎಲ್ಲ ವಿಭಾಗದಲ್ಲೂ ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು ಠೇವಣಿ ಸಂಗ್ರಹದಲ್ಲಿ ಸಾಧನೆ ಮಾಡಿದರೆ ಇಡೀ ದೇಶಕ್ಕೆ ನಂಬರ್ 1 ಬ್ಯಾಂಕ್ ಆಗುತ್ತದೆ. ಈ ದೆಸೆಯಲ್ಲಿ ಸೊಸೈಟಿಗಳಿಗೆ ಬ್ಯಾಂಕ್ ಎಲ್ಲ ರೀತಿಯ ನೆರವನ್ನು ನೀಡಲು ಬದ್ಧವಾಗಿದ್ದು 60 ಕಡೆ ಆನ್‍ಲೈನ್ ವ್ಯವಸ್ಥೆ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ. ಅಂಬೇಡ್ಕರ್ ಜಯಂತಿಯಂದು ಅವಳಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಹಕಾರಿ ಲ್ಯಾಬ್ ಉದ್ಘಾಟನೆ ಆಗಲಿದೆ ಎಂದು ಗೋವಿಂದಗೌಡ ತಿಳಿಸಿದರು. ಕೋಟ್ಮೊ ದಲು ಸಹಕಾರಿಗಳು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ಹಣವನ್ನು ಸೊಸೈಟಿ ಮತ್ತು ಡಿಸಿಸಿ ಬ್ಯಾಂಕಿನಲ್ಲಿ ಇಡುವ ಮೂಲಕ ಸಮಾಜಕ್ಕೆ ಮಾದರಿ ಆಗಬೇಕು. ಸಹಕಾರಿಗಳೇ ಸೊಸೈಟಿಯನ್ನು ನಂಬದೇ ಹೋದಲ್ಲಿ ಹೊಸಬರು ಸಹಕಾರಿ ವಲಯಕ್ಕೆ ಬರುವುದಾದರೂ ಹೇಗೆ? ಡಿಸಿಸಿ ಬ್ಯಾಂಕ್ ರೈತರು ಮತ್ತು ಸ್ತ್ರೀ ಶಕ್ತಿ ಸಂಘದ ವಿಷಯದಲ್ಲಿ ಬಹಳ ನಂಬಿಕೆ ಇಟ್ಟಿದ್ದು ಎಷ್ಟು ಸಾಲವನ್ನು ಬೇಕಾದರೂ ಕೊಡಲು ಸಿದ್ಧವಾಗಿದೆ. ಇದಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಕನಿಷ್ಠ ಮಟ್ಟದ ಠೇವಣಿಯನ್ನಾದರೂ ಕೊಡಲು ಸೊಸೈಟಿಗಳು ಮುಂದಾಗಬೇಕು. – ಎಂ.ಎಲ್.ಅನಿಲ್ ಕುಮಾರ್, ನಿರ್ದೇಶಕರು, ಡಿಸಿಸಿ ಬ್ಯಾಂಕ್.
ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ