

ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀವ೯ದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನದಲ್ಲಿ ಮಾ.13ರಂದು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ ಜರುಗಲಿದೆ.
ವೇದಮೂತಿ೯ ಶ್ರೀ ಮಧುಸೂಧನ ಬಾಯಿರಿ ಮಣೂರು ಇವರ ನೇತೃತ್ವದಲ್ಲಿ ಮಾ.12ರಂದು ಬೆಳಿಗ್ಗೆ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಋತ್ವಿಗ್ವರಣೀ ಗಣಯಾಗ, ಪವಮಾನ ಹೋಮ, ಆಯುತ ಸಂಖ್ಯಾತಿಲ ಹೋಮ, ಸಂಜೆ ಶ್ರೀ ದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ವಾಸ್ತು ರಾಕ್ಷೋಘ್ನ ಹೋಮ, ದಿಗ್ಬಲಿ ಕಾರ್ಯಕ್ರಮಗಳು ನಡೆಯಲಿದೆ.
ಮಾ.13ರಂದು ಬೆಳಿಗ್ಗೆ ಪಂಚ ವಿಂಶತಿದ್ರವ್ಯ ಕಲಶಪೂರ್ವಕ ಕಲಾತತ್ವ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ವೇದ ಪಾರಾಯಣ, ವಟುಬ್ರಾಹ್ಮಣ-ಸುವಾಸಿನೀ ಆರಾಧನೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಶ್ರೀ ದೇವರ ಸಂದರ್ಶನ, ಪಲ್ಲಪೂಜೆ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
ಸಂಜೆ ಗಂಟೆ 7ಕ್ಕೆ ನಾಗನಿಗೆ ಹಾಲಿಟ್ಟು ಸೇವೆ, ಮಂಡಲ ಪೂಜೆ, ಏಕಪವಿತ್ರ ನಾಗಮಂಡಲೋತ್ಸವ ನಂತರ ಮಹಾಪ್ರಸಾದದೊಂದಿಗೆ ಮಹಾಮಂತ್ರಾಕ್ಷತೆ ವಿತರಣೆಯಾಗಲಿದೆ.
ಮಾ.11ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ:
ಏಕಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಮಾ.11ರಂದು ಸಂಜೆ 4.30ರಿಂದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ಹೊರಡಲಿದೆ. ಈ ಹೊರೆಕಾಣಿಕೆ ಮೆರವಣಿಗೆಗೆ ಸಮಾಜ ಗಣ್ಯರು ಹಸಿರು ನಿಶಾನೆ ತೋರಿಸಿ ಭವ್ಯ ಪುರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಪುರಮೆರವಣಿಗೆಯಲ್ಲಿ ತಟ್ಟಿರಾಯ, ಕೀಲು ಕುದುರೆ, ಪಂಚವಾದ್ಯಗಳು, ಭಜನೆ ನಾಮ ಸಂಕೀತ೯ನೆ,
ಚಂಡೆವಾದನ, ಕಳಸ ಹಿಡಿದ ಮಹಿಳೆಯರು ಸೇರಿದಂತೆ ಇನ್ನಿತರ ಟ್ಯಾಬ್ಲೋಗಳು ಮೆರವಣಿಗೆಯ ವೈಭವನ್ನು ಹೆಚ್ಚಿಸಲಿದೆ.
ಮಾ.13ರಂದು ಧಾಮಿ೯ಕ ಸಭೆ. ಏಕಪವಿತ್ರ ನಾಗಮಂಡಲೋತ್ಸವದ ಧಾಮಿ೯ಕ ಸಭಾ ಕಾರ್ಯಕ್ರಮವು ಮಾ.13ರಂದು ಸಂಜೆ 4 ಗಂಟೆಗೆ ಜರುಗಲಿದೆ.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾಮಿ೯ಕ ಉಪನ್ಯಾಸ ನೀಡಲಿದ್ದಾರೆ. ಕೋಟೇಶ್ವರ ವಲಯದ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಾದಿರಾಜ್ ಹೆಬ್ಬಾರ್, ರೋಟರಿ ಸಹಾಯಕ ಗರ್ವನರ್ ಪ್ರಭಾಕರ್ ಬಿ ಕುಂಭಾಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ವತಿಯಿಂದ ಮಕ್ಕಳ ಯಕ್ಷಗಾನ ಕಂಸ ದಿಗ್ವಿಜಯ ಪ್ರದರ್ಶನಗೊಳ್ಳಲಿದೆ.




