ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅಪಘಾತ, ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೆ ಮ್ರತ್ಯು

ಬ್ರಹ್ಮಾವರ: ನಿನ್ನೆ ಸಂಜೆ ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮ್ರತಪಟ್ಟ ದುರ್ಘಟನೆ  ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರ ಪೆಟ್ರೋಲ್ ಬಂಕ್ ವೊಂದರ ಬಳಿ ನಡೆದಿದೆ.

ಶಿವಮೊಗ್ಗ ನಿವಾಸಿ ಸಮಿತ್ ಕುಮಾರ್(19) ಹಾಗೂ ಸಾಲಿಗ್ರಾಂ ಚಿತ್ರಪಾಡಿ ನಿವಾಸಿ ವಾಗೀಶ್(19) ಮೃತರೆಂದು ಗುರುತು ಹಿಡಿಯಲಾಗಿದೆ..

 ಇವರು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಇವರು ಕಾಲೇಜು ಮುಗಿಸಿ ರಾತ್ರಿ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಬೈಕ್ ಲಾರಿಗೆ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಮಲ ವಿ ಪೈ ವಿಶ್ವ ಕೊಂಕಣಿ ಪುರಸ್ಕಾರ ಪ್ರಕಟ

ಡಾ| ಜಯಂತಿ ವಲ್ಲಿ ಕ್ವಾಡ್ರಸ್‌ ಮಾಣಿಕ್ ರಾವ್‌ ಗವಣೇಕರ್‌

ಮಂಗಳೂರು: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಕೊಡಮಾಡುವ ಅಖೀಲ ಭಾರತ ಮಟ್ಟದ ಕೊಂಕಣಿ ಸಾಹಿತ್ಯ ಪ್ರಶಸ್ತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ-2021, ವಿಮಲಾ ವಿ. ಪೈ ವಿಶ್ವ ಕೊಂಕಣೆ ಕವಿತಾ ಕೃತಿ:
ಪುರಸ್ಕಾರ-2021 ಮತ್ತು ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ-2022ಗಳನ್ನು ಪ್ರಕಟಿಸಲಾಗಿದೆ.

ವರ್ಷದ ಅತ್ಯುತ್ತಮ ಸಾಹಿತ್ಯ ಪುರಸ್ಕಾರ 2022ಕ್ಕೆ ಗೋವಾದ ಡಾ| ಜಯಂತಿ ನಾಯ್ಕ ರಚಿಸಿದ ಕೊಂಕಣಿ ದೀರ್ಥ ಕತೆಗಳ ಸಂಕಲನ ತಿಚಿ ಕಾಣಿ (ಅವಳ ಕತೆ), ವರ್ಷದ ಅತ್ಯುತ್ತಮ ಕವಿತಾ ಕೃತಿ ಪುರಸ್ಕಾರ, ಮುಂಬಯಿಯ ವಲ್ಲಿ ಕ್ವಾಡ್ರಸ್‌ ಅವರ
ಕವಿತಾ ಸಂಕಲನ ಭಿತರಲೊ ಕವಿ (ಆಂತರ್ಯದ ಕವಿ) ಆಯ್ಕೆಯಾಗಿವೆ. ಜೀವನ ಸಿದ್ಧಿ ಸಮ್ಮಾನ 2022ಕ್ಕೆ ಹಿರಿಯ ಕೊಂಕಣಿ ಮುಂದಾಳು ಮಾಣಿಕ್ ರಾವ್‌ ಗವಣೇಕರ್‌ ಅವರನ್ನು ಕೊಂಕಣಿ ಭಾಷೆ, ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಹರಿಗಣಿಸಿ.
ಆಯ್ಕೆ ಮಾಡಲಾಗಿದೆ. 1 ಲಕ್ಷ ರೂ. ಸಮ್ಮಾನ ಧನ ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿರುವ ಈ ಪ್ರಶಸ್ತಿಗಳನ್ನು ದಾನಿ ಟಿ.ವಿ. ಮೋಹನದಾಸ ಪೈ ಅವರು ತಾಯಿ ವಿಮಲಾ ವಿ. ಹೈ ಅವರ ಹೆಸರಿನಲ್ಲಿ ಪ್ರಾಯೋಜಿಸಿದ್ದಾರೆ.

ಫೆಬ್ರವರಿ 9ರಂದು ಬೆಳಗ್ಗೆ 10 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿರುವ ವಾರ್ಷಿಕ ವಿಶ್ವ ಕೊಂಕಣಿ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು. ಈ ಪ್ರಶಸ್ತಿಗಳನ್ನು ಎರಡು ಸ್ತರದ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಲಾಗಿದ್ದು, ಪ್ರಾಥಮಿಕಸ್ತರದ ಆಯ್ಕೆ ಮಂಡಳಿಯ 16 ಸದಸ್ಯರ ನಾಮನಿರ್ದೇಶನದ ಆಧಾರದಲ್ಲಿ 5 ಸದಸ್ಯರ ಪರಿವೀಕ್ಷಕ ಮಂಡಳಿಯು ಅಂತಿಮ ಆಯ್ಕೆ ನಡೆಸುತ್ತದೆ.

2022ನೇ ಸಾಲಿನ ಪರಿವೀಕ್ಷಕ ಮಂಡಳಿಯಲ್ಲಿ ಉದಯ ಭಂಬ್ರೆ, ಡಾ| ಕಿರಣ್‌ ಬುಡುಗಳೆ, ಪಯ್ಯನೂರು ರಮೇಶ ಪೈ, ಮೆಲ್ವಿನ್‌ ರಾಡ್ರಿಗಸ್‌, ಗೋಕುಲದಾಸ ಪ್ರಭು ಸದಸ್ಯರಾಗಿದ್ದಾರೆ. 1996ನೇ ಇಸವಿಯಲ್ಲಿ ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈ
ಅವರ ನೇತೃತ್ವದಲ್ಲಿ ಪ್ರಾರಂಭವಾದ ಕೊಂಕಣಿ ಭಾಸ್‌ ಆನಿ ಸಂಸ್ಕೃತಿ ಪ್ರತಿಷ್ಠಾನವು ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸಿದ್ದು ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗಾಗಿ ಹಾಗೂ ಕೊಂಕಣಿ ಸಮುದಾಯಗಳ ಸರ್ವಾಂಗೀಣ ಬೆಳವಣಿಗಗಾಗಿ.
ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಚೇತನ್ ಶೆಟ್ಟಿ ಕೊವಾಡಿಯವರಿಗೆ ಜೆ.ಸಿ.ಐ ಕುಂದಾಪುರ ಸಿಟಿ ವತಿಯಿಂದ ಯುವ ರತ್ನ ಪ್ರಶಸ್ತಿ

ಕುಂದಾಪುರ : ಸಾಹಿತ್ಯ, ಸಾಂಸ್ಕೃತಿಕ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಯಲ್ಲಿ ನಿರತರಾಗಿರುವ ಕುಂದಾಪುರದ ಪ್ರತಿಷ್ಠಿತ ಡಾ|ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಯಾದ ಶ್ರೀ
ಚೇತನ್ ಶೆಟ್ಟಿ ಕೊವಾಡಿಯವರಿಗೆ ಜೆ.ಸಿ.ಐ ಕುಂದಾಪುರ ಸಿಟಿ ವತಿಯಿಂದ ಯುವ ರತ್ನ ಪ್ರಶಸ್ತಿಯನ್ನು ಜ.12 ರಂದು ವಿವೇಕಾನಂದ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ .ಉಮೇಶ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುಂದಾಪುರದ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಅತಿಥಿಗಳಾಗಿ ಕುಂದಾಪುರ ಸಿಟಿ ಜೆ ಸಿ ಐ ನ ಅಭಿಲಾಶ್ ಬಿ. ಎ, ಜೆ ಸಿ ಐ ನ ರಾಘವೇಂದ್ರ ಕುಲಾಲ್, ಪ್ರಶಾಂತ್ ಹವಾಲ್ದಾರ್, ಗಿರೀಶ್ ಹೆಬ್ಬಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕುಂದಾಪುರ ಸಿಟಿ ಜೆಸಿಐನ ಅಧ್ಯಕ್ಷ ಸೋನಿ ಡಿ. ಕೋಸ್ಟಾ ಸ್ವಾಗತಿಸಿದರು . ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಪ್ರಸ್ತಾವಿಸಿದರು. ಕುಂದಾಪುರ ಸಿಟಿ ಜೆಸಿಐನ ಮಹಿಳಾ ಸಂಚಾಲಕಿ ಪ್ರೇಮಾ ಸನ್ಮಾನಿತರನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಕೀರ್ತಿ ಪ್ರಾರ್ಥಿಸಿ,ಕನ್ನಡ ಉಪನ್ಯಾಸಕಿ ಪ್ರವೀಣ ಎಂ ಪೂಜಾರಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು

ಜೆಸಿಐ ಕುಂದಾಪುರ ಸಿಟಿಯ 2023 ನೇ ಸಾಲಿನ ಪದಪ್ರದಾನ ಸಮಾರಂಭ

ಕುಂದಾಪುರ: ವಲಯ 15 ರ ಪ್ರತಿಷ್ಠಿತ ಘಟಕ ಜೆಸಿಐ ಕುಂದಾಪುರ ಸಿಟಿಯ 2023 ನೇ ಸಾಲಿನ ಪದಪ್ರದಾನ ಸಮಾರಂಭವು ಇಲ್ಲಿನ ಸಹನ ಕನ್ವೆನ್ಷನ್ ಸುಮೇದ ಪಾರ್ಕ್ ನಲ್ಲಿ ನಡೆಯಿತು.

ಭಾರತೀಯ ರೆಡ್ ಕ್ರಾಸ್ ಕುಂದಾಪುರ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಡಾ. ಸೋನಿ ಡಿಕೋಸ್ಟ ರವರು ನೂತನ ಅಧ್ಯಕ್ಷರಾಗಿ ಪದ ಸ್ವೀಕಾರ ಮಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಗೆ 10 ಜನ ನೂತನ ಸದಸ್ಯರನ್ನು ಸೇರಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ವoದನೀಯ ಫಾದರ್ ಸ್ಟ್ಯಾನಿ ತಾವ್ರೊ, ವಲಯ 15ರ ವಲಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಕರ್ ಶೆಟ್ಟಿ, ಪೂರ್ವ ವಲಯ ಅಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷರಾದ ಅಭಿಲಾಶ್ ಬಿ ಎ, ನಿಕಟ ಪೂರ್ವ ಅಧ್ಯಕ್ಷರಾದ ವಿಜಯ ಭಂಡಾರಿ, ಪ್ರೇಮ ಡಿ ಕುನ್ಹಾ, ಲೋನಾ ಲುವಿಸ್, ಶೈಲಾ ಲುವಿಸ್, ಚಂದ್ರಿಕಾ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷರು ಗಳಾದ ಗಿರೀಶ್ ಹೆಬ್ಬಾರ್ ,ರಾಘವೇಂದ್ರ ಚರಣ ನಾವಡ ,ನಾಗೇಂದ್ರ ಪೈ, ಜಯಚಂದ್ರ ಶೆಟ್ಟಿ, ಚಂದ್ರಕಾಂತ್, ಶ್ರೀಧರ್ ಸುವರ್ಣ, ನಾಗೇಶ್ ನಾವಡ, ಪ್ರಶಾಂತ್ ಹವಲ್ದಾರ್, ಮಂಜುನಾಥ ಕಾಮತ್, ರಾಘವೇಂದ್ರ ಕುಲಾಲ್, ಕೆಕೆ ಶಿವರಾಂ ಮತ್ತಿತರರು ಉಪಸ್ಥಿತರಿದ್ದರು.

ಡಾ. ಸರೋಜಾ, ಶಿಕ್ಷಕಿ ಸಹನಾ ನಾವಡ ಜಯಶೀಲಾ ಪೈ ಗಣ್ಯರನ್ನು ಪರಿಚಯಿಸಿದರು.

ಬಿಕರ್ನಕಟ್ಟೆ – ಬಾಲಯೇಸು ಪುಣ್ಯ ಕ್ಷೇತ್ರದಲಿ ಬಾಲಯೇಸುವಿನ ಧ್ವಜ ಇಳಿಸುವ ಮೂಲಕ ವಾರ್ಷಿಕ ಮಹೋತ್ಸವಕ್ಕೆ ತೆರೆ


ಮಂಗಳೂರು: ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ 2023 ರ ವಾರ್ಷಿಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಏಳೆಯಲಾಯಿತು. ಇದರ ಪ್ರಯುಕ್ತ ಅ|ವಂ|ಮೊ|ಮ್ಯಾಕ್ಷಿಮ್ ನೊರೊನ್ಹಾ ಬಲಿಪೂಜೆಯನ್ನು ಅರ್ಪಿಸಿದ ಬಳಿಕ ಬಾಲ ಯೇಸುವಿನ ಸ್ವರೂಪವಿದ್ದ ಧ್ವಜವನ್ನು ಗೌರವ ಪೂರ್ವಕವಾಗಿ ಕೆಳಗಿಳಿಸಿ ಉತ್ಸವಕ್ಕೆ ತೆರೆ ಏಳೆಯಲಾಯಿತು.
ಈ ಸಂದರ್ಭದಲ್ಲಿ ಪುಣ್ಯ ಕ್ಷೇತ್ರದ ಮುಖ್ಯಸ್ಥರಾದ ವಂ|ಧರ್ಮಗುರು ರೊಮೇಲ್ ಡಿಸೋಜಾ, ಹಾಗೂ ಇನ್ನಿತರ ಧರ್ಮಗುರುಗಳು ಸಾವಿರಾರು ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಐವರು ಖ್ಯಾತರಿಗೆ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಪ್ರತಿಷ್ಠಿತ ರಚನಾ ಪ್ರಶಸ್ತಿ ಪ್ರದಾನ

ಮಂಗಳೂರು: ರಚನಾ, ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯು ತನ್ನ ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳ ಐದು ಗಣ್ಯ ವ್ಯಕ್ತಿಗಳಿಗೆ, ಭಾನುವಾರ, ಜನವರಿ 15 ರಂದು ಮಿಲಾಗ್ರೆಸ್ ಜುಬಿಲಿ ಹಾಲ್‌ನಲ್ಲಿ ಪ್ರದಾನ ಮಾಡಲಾಯಿತು.

ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಂಜಯ್ ಡಿಸೋಜ ಭಾಗವಹಿಸಿದ್ದರು.

ಲಿಯೋ ಫೆರ್ನಾಂಡಿಸ್, ಅಲ್ಲಿಪಾಡೆ, ಜೆರ್ರಿ ವಿನ್ಸೆಂಟ್ ಡಯಾಸ್, ಸೀನಿಯರ್ ಡಾ ಗ್ಲಾಡಿಸ್ ಮೆನೆಜಸ್, ಮೈಕೆಲ್ ಡಿಸೋಜಾ ಮತ್ತು ಡಾ ಲವೀನಾ ಎಂ ನೊರೊನ್ಹಾ ಅವರನ್ನು ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು, ವರ್ಷದ ಕೃಷಿಕ, ವರ್ಷದ ಉದ್ಯಮಿ, ವರ್ಷದ ವೃತ್ತಿಪರ ವಿಭಾಗಗಳಲ್ಲಿ ಗೌರವಿಸಿದರು. ವರ್ಷದ ಎನ್‌ಆರ್‌ಐ ಮತ್ತು ವರ್ಷದ ಮಹಿಳಾ ಸಾಧಕಿ ಪ್ರಶಸ್ತಿ, ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಸಂಜಯ್ ಡಿಸೋಜ, ‘ಐವರು ಪ್ರಶಸ್ತಿ ಪುರಸ್ಕೃತರು ಈಗಾಗಲೇ ತಮ್ಮ ಚಾರಿತ್ರ್ಯದ ದೃಷ್ಟಿಕೋನದಿಂದ ಸಮಾಜದ ಮೇಲೆ ಪ್ರಭಾವ ಬೀರಿದ್ದಾರೆ. ಅವರಲ್ಲಿ ಶಿಸ್ತು ಮತ್ತು ಜವಾಬ್ದಾರಿಯ ಬದ್ಧತೆ ಪಡೆದುಕೊಂಡಿದ್ದಾರೆ. ಪ್ರತಿಷ್ಠಿತ ರಚನಾ ಪ್ರಶಸ್ತಿಗಳನ್ನು ಪಡೆದಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು.

ಅದೇ ಸಮಯದಲ್ಲಿ, ರಚನಾ ಘಟನೆಯು ಅಸಂಘಟಿತ ಹಣಕಾಸು ಕ್ಷೇತ್ರಗಳ ಅಡಿಯಲ್ಲಿ ಬರುವ ನಮ್ಮ ಉದ್ಯಮಿಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಇಂದಿಗೂ 30 ರಿಂದ 40% ರಷ್ಟು ಉದ್ಯಮಿಗಳಿಗೆ ಆನ್‌ಲೈನ್ ಬ್ಯಾಂಕಿಂಗ್ ವಹಿವಾಟುಗಳು ಅಥವಾ ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾದ ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ತಿಳಿದಿಲ್ಲ. ಎರಡನೆಯದಾಗಿ, ಇತರ ನೆರೆಯ ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನ ಸಾಮಾಜಿಕ-ಆರ್ಥಿಕ ಬೆಳವಣಿಗೆಯು ಗಮನಾರ್ಹ ಮತ್ತು ಪ್ರಶಂಸನೀಯವಾಗಿದೆ. ನಗರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮವಾಗಿ ನಿರ್ಮಿಸಲಾದ ಬಹುಮಹಡಿ ಮನೆಗಳು, ಬೃಹತ್ ಬಂಗಲೆಗಳು ಮತ್ತು ಫ್ಲಾಟ್‌ಗಳನ್ನು ನಾವು ನೋಡಬಹುದು. ಆದರೆ ದುಃಖದ ವಿಷಯವೆಂದರ್ವ್ ನಿವಾಸಿಗಳಲ್ಲಿ ಒಂದೇ ಒಂದು ಯುವಕ ಅಥವಾ ಮಗುವನ್ನು ನಾವು ಕಾಣುವುದಿಲ್ಲ. ವಯಸ್ಸಾದವರು ಒಂಟಿಯಾಗಿ ಕಾಲ ಕಳೆಯುತ್ತಾರೆ. ಎಲ್ಲೋ ಇದು ಅಪಾಯವನ್ನು ಸೂಚಿಸುತ್ತದೆ. ಇಲ್ಲಿ ರಚನಾ ಅವರಂತಹ ಸ್ಥಳೀಯ ಉದ್ಯಮಿಗಳು ಮತ್ತು ಸಂಘಗಳ ಮೇಲಿನ ಜವಾಬ್ದಾರಿ ಹೆಚ್ಚುತ್ತದೆ. ಯುವ ಪೀಳಿಗೆಯು ಬೇರೆ ದೇಶಗಳಿಗೆ ನಿರಂತರವಾಗಿ ವಲಸೆ ಹೋಗುವುದಕ್ಕೆ ಬ್ರೇಕ್ ಹಾಕಲು ಅವರು ಪರಿಹಾರವನ್ನು ಕಂಡುಕೊಳ್ಳಬೇಕು. ಅವರಿಗೆ ಉದ್ಯೋಗ ಮಾರುಕಟ್ಟೆ ಸೃಷ್ಟಿಸಿ ನಗರಕ್ಕೆ ಕರೆತರಬೇಕು’’ ಅವರು ಎಂದು ಒತ್ತಾಯಿಸಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬಿಷಪ್ ಡಾ.ಪೀಟರ್ ಪೌಲ್ ಅವರು, “ಇದು ಕೇವಲ ಪ್ರಶಸ್ತಿ ರಾತ್ರಿ ಅಲ್ಲ. ಇದು ಸ್ಪೂರ್ತಿದಾಯಕ ರಾತ್ರಿ ಎಂದು ನಾನು ಹೇಳಬಲ್ಲೆ. ಎಲ್ಲಾ ವಿಜೇತರು ತಮ್ಮ ಭಾಷಣಗಳಲ್ಲಿ ಸರ್ವಶಕ್ತ ಮತ್ತು ಅವರ ಆಶೀರ್ವಾದವನ್ನು ಉಲ್ಲೇಖಿಸಿರುವ ಒಂದು ವಿಷಯವನ್ನು ನಾನು ಗಮನಿಸಿದ್ದೇನೆ. ಹಾಗಾಗಿ ನಾವು ಕೂಡ ಈ ರೀತಿ ಸಾಧನೆ ಮಾಡಬಹುದು. ಈ ರಾತ್ರಿಯನ್ನು ಪವಿತ್ರ ರಾತ್ರಿ ಎಂದು ಕರೆದುಕೊಳ್ಳಿ. ಅವರವರ ಕ್ಷೇತ್ರಗಳ ಜೊತೆಗೆ, ಐವರೂ ಅವರ ದಾನ ಮತ್ತು ಸಮಾಜ ಸೇವೆಗಾಗಿ ಗುರುತಿಸಿಕೊಂಡಿದ್ದಾರೆ. ಐವರೂ ಸಮಾಜದ ಬಗ್ಗೆ ಒಂದೇ ಪದದಲ್ಲಿ ಉಲ್ಲೇಖಿಸಿದ್ದಾರೆ. ಮತ್ತು ಅದು ‘ದಯೆ’ ಎಂದು ನಾವು ಹೇಳಬಹುದು. ಅವರು ತಮ್ಮ ಕ್ಷೇತ್ರಗಳಲ್ಲಿ ಬದಲಾಗಬಹುದು ಆದರೆ ಅವರು ‘ದಯೆ’ ಅವರಲ್ಲಿ ಮುಖ್ಯವಾಗಿದೆ. ಟೀಕೆಗಳನ್ನು ನಿಭಾಯಿಸಲು ಮತ್ತು ಧೈರ್ಯದಿಂದ ಒಳ್ಳೆಯ ಕೆಲಸಕ್ಕೆ ಅಂಟಿಕೊಳ್ಳಲು ಪ್ರಶಸ್ತಿಗಳು ಮತ್ತು ಮೆಚ್ಚುಗೆಗಳು ಹೆಚ್ಚು ಅಗತ್ಯವಿದೆ.

ಅಧ್ಯಕ್ಷ ವಿನ್ಸೆಂಟ್ ಕುಟಿನ್ಹಾ ಗಣ್ಯರನ್ನು ಸ್ವಾಗತಿಸಿ, ವಂದಿಸಿದರು. ಸಂಚಾಲಕ ಸಿ ಎ ರುಡಾಲ್ಫ್ ರೋಡ್ರಿಗಸ್ ಮತ್ತು ಕಾರ್ಯದರ್ಶಿ ಲವಿನಾ ಮೊಂತೇರೊ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭವು ಅದ್ದೂರಿ ಭೋಜನದೊಂದಿಗೆ ಮುಕ್ತಾಯಗೊಂಡಿತು. ಸೇಂಟ್ ರೀಟಾ ಬ್ಯಾಂಡ್, ಕ್ಯಾಸಿಯಾ ತನ್ನ ಲೈವ್ ಸಂಗೀತದೊಂದಿಗೆ ಸಭೆಯನ್ನು ರಂಜಿಸಿತು. ಹಿಂದಿನ ಅಧ್ಯಕ್ಷರು ಮತ್ತು ಪ್ರಾಯೋಜಕರನ್ನು ಸನ್ಮಾನಿಸಲಾಯಿತು.

ಖ್ಯಾತ ಕಾರ್ಯಕ್ರಮ ನಿರೂಪಕ ಮತ್ತು ಉದ್ಯಮಿ ಲೆಸ್ಲಿ ರೆಗೊ ಕಾರ್ಯಕ್ರಮವನ್ನು ನಿರೂಪಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರಕ್ಕೆ ಕರೆತಂದು ಹರಕೆಯ ಕುರಿಯಾಗಿ ಮಾಡಲು ಹೊರಟಿದ್ದಾರೆ:ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯ

ಕೋಲಾರ:- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ನ ಕೆಲವು ಸ್ಥಳೀಯ ನಾಯಕರು ಕೋಲಾರಕ್ಕೆ ಕರೆತಂದು ಹರಕೆಯ ಕುರಿಯಾಗಿ ಮಾಡಲು ಹೊರಟಿದ್ದಾರೆ, ಕೋಲಾರದ ಜನ ಬುದ್ದಿವಂತರು ಅವರಿಗೆ ತಕ್ಕಪಾಠ ಕಲಿಸಿ ಕಳುಹಿಸಿಕೊಡಲಿದ್ದಾರೆ ಎಂದು ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರಕ್ಕೆ ಬಂದು ಸ್ಪರ್ಧೆ ಮಾಡುವುದು ಅವರ ವೈಯಕ್ತಿಕ ಹಾಗೂ ಅವರ ಪಕ್ಷದ ವಿಚಾರ. ಆದರೆ ಅವರ ಪಕ್ಷದ ಕೆಲವು ನಾಯಕರೇ ಕೋಲಾರಕ್ಕೆ ಕರೆತಂದು ಹರಕೆಯ ಕುರಿ ಮಾಡುತ್ತಿರುವುದು ವಾಸ್ತವದ ಸಂಗತಿ ಎಂದರು.
ಮಾಜಿ ಮುಖ್ಯಮಂತ್ರಿಯನ್ನು ಕರೆದುಕೊಂಡು ಬಂದು ಇಲ್ಲಿನ ಕೆಲವು ರಾಜಕಾರಣಿಗಳು ಬಲಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿದೆ ಎಂದರು.
ಯಾರೇ ಒಬ್ಬ ಹಿರಿಯ ನಾಯಕರು, ಮಾರ್ಗದರ್ಶನ ಕೊಡುವವರಿಗೆ ನಾವು ಮೊದಲಿನಿಂದಲೂ ಗೌರವ ನೀಡುತ್ತಾ ಬಂದಿರುವುದು ನಮ್ಮ ಸಂಪ್ರದಾಯ. ಸಿದ್ದರಾಮಯ್ಯ ಗೆಲ್ಲಬೇಕು, ಸೋಲಬೇಕು ಎನ್ನುವ ವಿಚಾರ ನಮ್ಮ ಬಳಿ ಇಲ್ಲ. ಆದರೆ, ಅವರದ್ದೇ ಪಕ್ಷದ ಕೆಲವು ನಾಯಕರು ಕೋಲಾರಕ್ಕೆ ಕರೆ ತಂದು ಹರಕೆಯ ಕುರಿ ಮಾಡಲು ನಿಂತಿದ್ದಾರೆ ಎನ್ನುವುದು ವಾಸ್ತವಾಂಶವಾಗಿದೆ ಎಂದರು.
ಇನ್ನು ಸಿ.ಪಿ.ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ, ನಾನೂ ಗೆಲ್ಲುವುದಿಲ್ಲ ಎಚ್.ಡಿ.ಕುಮಾರಸ್ವಾಮಿ ಗೆದ್ದಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಗೆಲ್ಲೋದಿಲ್ಲ ಮತ್ತೊಮ್ಮೆ ಆಪರೇಷನ್ ಮಾಡಿ ಅಧಿಕಾರಕ್ಕೆ ಬರುವುದಾಗಿಯೂ ಯಾವ ಬಾಯಲ್ಲಿ ಹೇಳಿದ್ದಾರೋ ಎಂದು ಕಿಡಿಕಾರಿದರು.
ಗೆಲ್ತೀವಿ ಅನ್ನೋ ಆತ್ಮಸ್ಥೈರ್ಯ, ವಿಶ್ವಾಸವಿಲ್ಲ. ಯಾರು ಗೆಲ್ಲುತ್ತಾರೆ ನೋಡೋಣ ಎಷ್ಟು ಕೋಟಿ ಕೊಡಬೇಕು ಎನ್ನುವ ಡೀಲ್‍ಗೆ ಅವರು ಮುಂದಾಗಿದ್ದಾರೆ. ಆದರೆ ಈ ಬಾರಿ ಅದ್ಯಾವುದೂ ನಡೆಯುವುದಿಲ್ಲ. ರೈತರು, ಸಾರ್ವಜನಿಕರು ಮೂರೂವರೆ ವರ್ಷದ ಬಿಜೆಪಿ ಸರಕಾರ ನೋಡಿದ್ದಾರೆ ಎಂದರು.
ಡಬಲ್ ಎಂಜಿನ್ ಸರಕಾರ ಏನು ಮಾಡಿದೆ. ಜಿಎಸ್‍ಟಿಯಲ್ಲಿ ನಮ್ಮ ಪಾಲಿನ ಹಣವನ್ನು ಕೇಂದ್ರದಿಂದ ತರಲು ಸಾಧ್ಯವಾಗಿಲ್ಲ. ಮುಂದೆ ಸರಕಾರ ಬಂದರೆ ಇಂತಹ ಯೋಜನೆ ಜಾರಿಗೆ ತರುತ್ತೇವೆ ಎಂದು ಎಲ್ಲೂ ಹೇಳುತ್ತಿಲ್ಲ. ಆದರೆ, ಕುಮಾರಸ್ವಾಮಿ ಪಂಚರತ್ನ ಯೋಜನೆಗಳನ್ನು ರೂಪಿಸಿಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಅಂತಹ ಶಕ್ತಿ ಹೊಂದಿರುವ ಏಕೈಕ ಪಕ್ಷ ಜೆಡಿಎಸ್ ಎಂದು ಹೇಳಿದರು.
ಜೆಡಿಎಸ್ ಪಕ್ಷಕ್ಕೆ ಸಿ.ಎಂ.ಇಬ್ರಾಹಿಂ ಅವರು ರಾಜ್ಯಾಧ್ಯಕ್ಷರಾದ ಬಳಿಕ ಅಲ್ಪಸಂಖ್ಯಾತರ ಕೂಗು ನಮ್ಮ ಪಕ್ಷದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಕೋಲಾರ ಭಾಗದಲ್ಲಿ ಅಭ್ಯರ್ಥಿಗಳನ್ನು ಜೆಡಿಎಸ್ ಬಾವುಟ ಹಾರಿಸಿ, ಎಚ್ಡಿಕೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಜನರೇ ಹೇಳುತ್ತಿದ್ದಾರೆ. ನಾನು ಸಹ ಮುಂದಿನ ದಿನಗಳಲ್ಲಿ ಈ ಭಾಗದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಅಮಿತ್ ಶಾ ಮಂಡ್ಯಕ್ಕೆ ಒಂದು ಬಾರಿ ಬಂದಾಗಲೇ ಬಾಂಬ್ ಒಂದನ್ನು ಹಾಕಿ ಹೋಗಿದ್ದಾರೆ. ಅಮುಲ್‍ಗೆ ನಂದಿನಿಯನ್ನು ಸೇರಿಸುತ್ತೇವೆ ಎಂದರೆ ಅದು ಯಾರಪ್ಪನ ಆಸ್ತಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದರು.
ನಂದಿನಿ ಎಂಬ ಬಡ ಸಂಸ್ಥೆಯನ್ನು ರೈತರು, ಸಾರ್ವಜನಿಕರು ಇಷ್ಟು ದೊಡ್ಡ ಮಟ್ಟಕ್ಕೆ ಶಕ್ತಿಯಾಗಿ ಬೆಳೆಸಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನ ಸಚಿವರಿಗೆ ಸಮಾನವಾಗಿದೆ. ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಡೀ ರಾಜ್ಯದಲ್ಲಿ ಡೈರಿ ಸ್ಥಾಪನೆಯಾಗಿರುವುದರಿಂದಲೇ ಸಿಲ್ಕ್-ಮಿಲ್ಕ್-ಚಿನ್ನಕ್ಕೆ ಹೆಸರುವಾಸಿಯಾಗಿದೆ ಎಂದ ಅವರು, ಅಮಿತ್ ಶಾ 10ಬಾರಿ ಅಲ್ಲ 15 ಬಾರಿ ಬಂದರೂ ಅಷ್ಟೇ ಮಂಡ್ಯದಲ್ಲಿ ಕಳೆದ ಬಾರಿ ಪಡೆದಿದ್ದ ರೀತಿಯಲ್ಲೇ 100 ಕ್ಕೆ 100 ಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ. ಮಂಡ್ಯ ಎಂದಿಗೂ ದೇವೇಗೌಡರ ಕ್ಷೇತ್ರ ಎಂದು ನುಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಕೋಲಾರ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಬಂಗಾರಪೇಟೆ ಅಭ್ಯರ್ಥಿ ಮಲ್ಲೇಶ್‍ಬಾಬು, ಮುಖಂಡರಾದ ವಕ್ಕಲೇರಿ ರಾಮು, ಬಣಕನಹಳ್ಳಿ ನಟರಾಜ್, ಜಮೀರ್, ಮುಸ್ತಾಫ ಮತ್ತಿತರರಿದ್ದರು.

ಸಾಂತಾವರ ನಿವಾಸಿ ರಾಮ ಪೂಜಾರಿ ನಿಧನ


ಕುಂದಾಪುರ ಸಾಂತಾವರ ನಿವಾಸಿ ರಾಮ ಪೂಜಾರಿ ದಾಸಿಕಟ್ಟೆ (83) ಅವರು ಅಲ್ಪಕಾಲದ ಅಸೌಖ್ಯದಿಂದ ಜ. 11ರಂದು ಬುಧವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಇವರು ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.